ಸೆಲ್ಲೂಕಸ್, ನಿಕೇಟಾರ್
	ಕ್ರಿ.ಪೂ. 358-281. ಅಲೆಗ್ಸಾಂಡರನ ದಂಡನಾಯಕ ಹಾಗೂ ಪ್ರಾಚೀನ ಭಾರತದ ಮೇಲೆ ಆಕ್ರಮಣ ಮಾಡಿದ ಗ್ರೀಕ್ ದಾಳಿಕಾರ. ಅಲೆಗ್ಸಾಂಡರ್‍ನ ಮರಣಾನಂತರ ಅವನ ಸಾಮ್ರಾಜ್ಯ ಛಿದ್ರಛಿದ್ರವಾಗಿ, ಅವನ ದಂಡನಾಯಕರು ಅಲ್ಲಲ್ಲಿ ತಾವೇ ಸ್ವತಂತ್ರ ರಾಜರಾದರು. ಟಾಲಮಿ ಈಜಿಪ್ಟ್ ಪ್ರಭುವಾದರೆ, ಆಂಟಿಗೋನಸ್ ಮ್ಯಾಸಿಡೋನಿಯಕ್ಕೆ ರಾಜನಾದ. ಸೆಲ್ಲೂಕಸ್ ಪಶ್ಚಿಮ ಏಷ್ಯದ ಅಧಿಪತಿಯಾದ. ಅಲೆಗ್ಸಾಂಡರ್ ವಾಯವ್ಯ ಭಾರತದಲ್ಲಿ ಗೆದ್ದುಕೊಂಡಿದ್ದ ಪ್ರದೇಶಗಳನ್ನು ಈತ ಜಯಿಸಲು ನಿರ್ಧರಿಸಿದ. ಇವನು ಬ್ಯಾಕ್ಟ್ರಿಯವನ್ನು ಗೆದ್ದ ಮೇಲೆ ವಾಯವ್ಯ ಭಾರತದ ಕಡೆ ನುಗ್ಗಿದ (ಕ್ರಿ.ಪೂ.305). ಆಗ ಭಾರತ ಚಂದ್ರಗುಪ್ತಮೌರ್ಯನ ಆಡಳಿತದಲ್ಲಿ ಬಲಾಢ್ಯ ಸಾಮ್ರಾಜ್ಯವಾಗಿತ್ತು. ಸಿಂಧೂ ನದಿ ದಾಟಿ ಬಂದ ಇವನನ್ನು ಎದುರಿಸಲು ಚಂದ್ರಗುಪ್ತ ಮೌರ್ಯ ಐದು ಲಕ್ಷ ಸೈನ್ಯದೊಂದಿಗೆ ಸಜ್ಜಾಗಿದ್ದ. ಇವರಿಬ್ಬರಿಗೂ ಕಾಳಗ ನಡೆದು, ಸೋಲು ಖಚಿತವೆಂದರಿತ ಈತ ಚಂದ್ರಗುಪ್ತನೊಡನೆ ಒಪ್ಪಂದ ಮಾಡಿಕೊಂಡ. ಒಪ್ಪಂದದ ಪ್ರಕಾರ ಚಂದ್ರಗುಪ್ತಮೌರ್ಯನಿಗೆ ಹೀರಟ್, ಕಂದಹಾರ್, ಕಾಬೂಲ್, ಬಲೂಚಿಸ್ತಾನ ಪ್ರಾಂತಗಳನ್ನು ಬಿಟ್ಟುಕೊಟ್ಟ. ಹೊಸ ಪ್ರಾಂತಗಳ ಸೇರ್ಪಡೆಯಿಂದಾಗಿ ಮೌರ್ಯ ಸಾಮ್ರಾಜ್ಯ ಹಿಂದೂಕುಷ್ ಪರ್ವತದವರೆಗೆ ಹಬ್ಬಿತು. ಚಂದ್ರಗುಪ್ತ ಮೌರ್ಯನ ಪ್ರತಿಷ್ಠೆ ಮತ್ತಷ್ಟು ಹೆಚ್ಚಿತು. ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತ ಮೌರ್ಯ ಇವನಿಗೆ 500 ಆನೆಗಳನ್ನು ಕೊಟ್ಟ. ಸೆಲ್ಲೂಕಸ್ ತನ್ನ ಸ್ನೇಹದ ಸಂಕೇತವಾಗಿ ಮಗಳು ಹೆಲೆನಳನ್ನು ಚಂದ್ರಗುಪ್ತಮೌರ್ಯನಿಗೆ ಮದುವೆ ಮಾಡಿಕೊಟ್ಟ. ಈತ ಮೆಗಾಸ್ತನೀಸ್ ಎಂಬ ತನ್ನ ರಾಯಭಾರಿ ಯನ್ನು ಚಂದ್ರಗುಪ್ತನ ಆಸ್ಥಾನಕ್ಕೆ ಕಳಿಸಿದ್ದ. ಮೆಗಾಸ್ತನೀಸ್ ನಾಲ್ಕು ವರ್ಷ ಪಾಟಲಿಪುತ್ರದಲ್ಲಿದ್ದು ಇಂಡಿಕಾ ಎಂಬ ಗ್ರಂಥ ರಚಿಸಿದ (ಕ್ರಿಪೂ 305-299). 									
		(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ